ಮೇ 1 : ಧರ್ಮಸ್ಥಳದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ

ಧರ್ಮಸ್ಥಳದಲ್ಲಿ ಮೇ 1 ರಂದು ಬುಧವಾರ ಸಂಜೆ ಗಂಟೆ 6.45 ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 52 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.

      ಈ ವರ್ಷ 123 ಜೊತೆ ವಧು-ವರರು ಸೂಕ್ತ ಪ್ರಮಾಣಪತ್ರ ಮತ್ತು ದಾಖಲಾತಿಗಳೊಂದಿಗೆ ವಿವಾಹಕ್ಕೆ ಹೆಸರು ನೋಂದಾಯಿಸಿದ್ದು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಧು-ವರರಿಗೆ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮಂಗಳಸೂತ್ರ ನೀಡಿದರು.

     

ಸಂಜೆ 5 ಗಂಟೆಗೆ ವಧೂ-ವರರು ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು. ಅಲ್ಲಿ ಅವರವರ ಜಾತಿಸಂಪ್ರದಾಯದಂತೆ ಒಂದೇ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಸಲಾಯಿತು.

      ಪೂಜ್ಯ ಹೆಗ್ಗಡೆಯವರು ಹಾಗೂ ಚಲನಚಿತ್ರನಟ ದೊಡ್ಡಣ್ಣ ಶುಭಾಶಂಸನೆ ಮಾಡಿದರು.ಬಳಿಕ ನೂತನ ದಂಪತಿಗಳು ದೇವರದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ಊರಿಗೆ ತೆರಳಿದರು.

      ಸಾಮೂಹಿಕ ವಿವಾಹದಲ್ಲಿ ಮದುವೆ ಆದವರಿಗೆ ಸರ್ಕಾರದ ವತಿಯಿಂದ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲಾಗುವುದು.

      ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ 1972 ರಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿದ್ದು, ಪ್ರತಿ ವರ್ಷ ಇದನ್ನು ನಡೆಸಲಾಗುತ್ತದೆ. ಕಳೆದ ವರ್ಷದ ವರೆಗೆ 12,777 ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು, ಸುಖ-ಶಾಂತಿ, ನೆಮ್ಮದಿಯ ದಾಂಪತ್ಯಜೀವನ ನಡೆಸುತ್ತಿದ್ದಾರೆ.